ನಾದಿರ್ ಶಹ
1688-1747 ಪರ್ಷಿಯಾದ ದೊರೆ. ಆಕ್ರಮಣಕಾರ. ನಾದಿರ್ ಕುಲಿ ಬೇಗ್ ಎಂಬುದು ಇವನ ಮೊದಲಿನ ಹೆಸರು. ತಂದೆ ಇಮಾಮ್ ಕುಲಿ. ಕುರಿಯ ಚರ್ಮದಿಂದ ಕೋಟು, ಕುಲಾವಿಗಳನ್ನು ತಯಾರಿಸಿ ಜೀವನ ಮಾಡುತ್ತಿದ್ದ ಜನರ ಪೈಕಿ ಒಬ್ಬ. ನಾದಿರ್ ಕುಲಿ ಬೇಗ್ ಹದಿನೇಳು ವರ್ಷದವನಿದ್ದಾಗ ಉಜ್óಬೇಕ್ ದರೋಡೆಕೋರರು ಇವನನ್ನು ಹಾರಿಸಿಕೊಂಡು ಹೋಗಿ ನಾಲ್ಕು ವರ್ಷ ಸೆರೆಯಲ್ಲಿಟ್ಟಿದ್ದರು. ಅಲ್ಲಿಂದ ಬಿಡುಗಡೆಯಾಗಿ ಬಂದ ಮೇಲೆ ಪುಂಡುನಾಯಕರ ಕೈಕೆಳಗೆ ಸ್ವಲ್ಪ ಕಾಲ ಕೆಲಸ ಮಾಡಿ ಕಡೆಗೆ ತಾನೇ ಒಂದು ತಂಡದ ನಾಯಕನಾದ. ತುರ್ಕರು, ರಷ್ಯನರು ಮತ್ತು ಆಫ್ಘನ್ನರು ಪರ್ಷಿಯವನ್ನು ಕಬಳಿಸಿದ್ದರು. ಪರ್ಷಿಯದ ಶಹನ ಮಗ ಸಫಾವಿದ್‍ಶಹ 2ನೆಯ ತಹ್‍ಮಾಸ್ಪ್ ಶತ್ರುಗಳ ಕೈಗೆ ಸಿಗದೆ ತಲೆತಪ್ಪಿಸಿಕೊಂಡಿದ್ದು, ತನ್ನ ತಂದೆ ಕಳೆದುಕೊಂಡಿದ್ದ ಸಿಂಹಾಸನವನ್ನು ನಾದಿರ್ ಕುಲಿಯ ನೆರವಿನಿಂದ ಮತ್ತೆ ಪಡೆದುಕೊಂಡ. ನಾದಿರ್‍ಕುಲಿಯ ಉಪಕಾರಕ್ಕೆ ಪ್ರತಿಯಾಗಿ ಅವನಿಗೆ ಅರ್ಧರಾಜ್ಯವನ್ನೂ ಕಿರೀಟವನ್ನೂ ಕೊಟ್ಟ (1727). ಆಫ್ಘನ್ ದೇಶದ ಆಬ್ಡಾಲಿ ಮತ್ತು ಘಿಲ್‍ಜೀಗಳ ದಂಗೆಗಳನ್ನು ಹತ್ತಿಕ್ಕಲು ಸಫಾವಿದ್‍ಶಹ ಅತ್ತ ಹೋಗಿದ್ದಾಗ ಶಹ ನಡೆಸಿದ ಕೆಲವು ಅವಿವೇಕಗಳ ಫಲವಾಗಿ ಜನತೆ ಅಸಮಾಧಾನಗೊಂಡಿತು. ನಾದಿರ್ ಕುಲಿ ಅವನನ್ನು ಸಿಂಹಾಸನದಿಂದ ಇಳಿಸಿದ. ಸಿಂಹಾಸನದ ಮೇಲೆ ಅವನ ಎಂಟುತಿಂಗಳ ಮಗುವನ್ನು ಕೂಡಿಸಿ (1732) ರಾಜ್ಯಭಾರ ಮಾಡಿದ. ಮಗುವಿಗೆ ನಾಲ್ಕು ವರ್ಷ ಆಗಿದ್ದಾಗ ಅದು ತೀರಿಕೊಂಡಿತು. ನಾದಿರ್ ತಾನೇ ಪರ್ಷಿಯಾದ ದೊರೆಯಾದ; ನಾದಿರ್‍ಶಹ ಆದ. 80,000 ಜನರ ಸೈನ್ಯದ ಸಮೇತ ಇವನು ದಂಡಯಾತ್ರೆ ಹೊರಟು ಕಾಂದಾಹಾರನ್ನು ಗೆದ್ದು ಪಂಜಾಬನ್ನು ಪ್ರವೇಶಿಸಿದ. ಕರ್ನಾಲ್ ಬಳಿ ಇವನ ಸೈನ್ಯಕ್ಕೂ ಮೊಗಲ್ ಸೈನ್ಯಕ್ಕೂ ಯುದ್ಧವಾಯಿತು. ನಾದಿರ್ ಶಹ ಗೆದ್ದ. ಸೋತ ಮೊಗಲ್ ಚಕ್ರವರ್ತಿಯನ್ನು ಅವನು ಚೆನ್ನಾಗಿಯೇ ನೋಡಿಕೊಂಡ. ಅವನಿಗೂ ದೆಹಲಿಯ ಚಕ್ರವರ್ತಿಗೂ ಒಪ್ಪಂದವಾಯಿತು. ನಾದಿರ್ ಶಹ ಅರಮನೆಯನ್ನು ಪ್ರವೇಶಿಸಿದ. ಅರಮನೆಯಲ್ಲಿ ಚಕ್ರವರ್ತಿ ಸತ್ತನೆಂಬ ಸುಳ್ಳು ಸುದ್ದಿ ಹುಟ್ಟಿ ಜನರು ಪರ್ಷಿಯನ್ನರ ಮೇಲೆ ತಿರುಗಿ ಬಿದ್ದರು. ಇದರಿಂದ ಕೋಪಗೊಂಡ ನಾದಿರ್ ಶಹ ದೆಹಲಿಯನ್ನು ಕೊಳ್ಳೆ ಹೊಡೆಯಲು ಸೈನ್ಯಕ್ಕೆ ಅಪ್ಪಣೆ ಮಾಡಿದ. ಅದು ಭೀಕರವಾದ ಲೂಟಿಯಲ್ಲಿ ತೊಡಗಿತು. ಅವನು 58 ದಿನಗಳ ಕಾಲ ದೆಹಲಿಯಲ್ಲಿದ್ದು ಮಯೂರ ಸಿಂಹಾಸನವನ್ನೂ ಆನೆ ಕುದುರೆಗಳನ್ನೂ ಅಗಾಧ ಸಂಪತ್ತಿನ ರಾಶಿಯನ್ನೂ ದೋಚಿಕೊಂಡ. ಜೊತೆಗೆ ಕರಕುಶಲಿಗಳೊಡನೆ ಸ್ವದೇಶಕ್ಕೆ ಹಿಂದಿರುಗಿದ. ಅವನು ದೋಚಿಕೊಂಡು ಹೋದ ಬೆಳ್ಳಿ ಬಂಗಾರ ನಗನಾಣ್ಯಗಳ ಬೆಲೆ ಸುಮಾರು ರೂ. 90 ಕೋಟಿ. ಅನಂತರ ರಷ್ಯನರು ಮತ್ತು ಆಟೋಮನ್ ತುರ್ಕರ ಮೇಲೂ ಅವನು ದಂಡೆತ್ತಿ ಹೋದ. ಅವನ ಸಾಮ್ರಾಜ್ಯ ಸಿಂಧೂನದಿಯಿಂದ ಕಾಕಸಸ್ ಪರ್ವತಗಳವರೆಗೆ ಹಬ್ಬಿತ್ತು.

	ನಾದಿರ್ ಶಹಾ ಅತ್ಯಂತ ಕ್ರೂರಿ. ಅವನಿಗೆ ವಯಸ್ಸಾದಂತೆ ಅವನ ಕ್ರೌರ್ಯ ಮಿತಿಮೀರಿ ಬೆಳೆಯಿತು. ತನ್ನ ಮಗ ತನ್ನ ವಿರುದ್ಧ ಪಿತೂರಿ ಮಾಡುತ್ತಿದ್ದನೆಂಬ ಸಂಶಯದಿಂದ ನಾದಿರ್ ಅವನ ಕಣ್ಣನ್ನೇ ಕೀಳಿಸಿದ. ಅವನು ಪದೇ ಪದೇ ನಡೆಸುತ್ತಿದ್ದ ದಂಡಯಾತ್ರೆಗಳಿಂದಾಗಿ ಸಾಮ್ರಾಜ್ಯದ ಬೊಕ್ಕಸ ಬರಿದಾಗಿತ್ತು. ನಾದಿರ್ ಶಹ ಸುನ್ನಿ ಮುಸ್ಲಿಮನಾಗಿದ್ದಾಗ್ಯೂ ಪ್ರಜೆಗಳು ಶೀಯ ಪಂಗಡದವರಾಗಿದ್ದರು. ಅವರನ್ನು ತನ್ನ ಪಂಗಡಕ್ಕೆ ಪರಿವರ್ತಿಸಲು ಅವನು ಯತ್ನಿಸಿದ್ದ. ಇದರಿಂದ ಪ್ರಬಲವಾದ ವಿರೋಧ ಬೆಳೆಯಿತು. ಅವನ ಸಂಶಯವೂ ಬೆಳೆಯುತ್ತಲೇ ಇತ್ತು. ಅವನು ಜನಗಳಿಗೆ ನೀಡುತ್ತಿದ್ದ ಚಿತ್ರಹಿಂಸೆ ಅತಿಯಾಯಿತು. ಅನೇಕರನ್ನು ಅವನು ನಿರ್ದಯೆಯಿಂದ ಕೊಲೆ ಮಾಡಿಸಿದ. ಕೊನೆಗೆ ಅವನ ಸೈನ್ಯದವರೇ ಅವನನ್ನು ಕೊಂದು ಹಾಕಿದರು (1747). ಪರ್ಷಿಯಾದ ನೆಪೋಲಿಯನ್ ಎಂದು ಹೆಸರಾದ ನಾದಿರ್ ಶಹ ಯುದ್ಧ ಚತುರ. ಆದರೆ, ಮಾನವೀಯತೆ ಅವನಲ್ಲಿ ಎಳ್ಳಷ್ಟೂ ಇರಲಿಲ್ಲ.
(ಸಿ.ಕೆ.ಎನ್.ಆರ್.; ಕೆ.ಎಸ್.ಆರ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ